ಚಿಲಿ ಸಾಹಿತ್ಯ

ಚಿಲಿ ಸಾಹಿತ್ಯ 16ನೆಯ ಶತಮಾನದಿಂದ ಆರಂಭವಾಗುತ್ತದೆ. ಸ್ಪೇನಿನವನಾದ ಅಲೋನ್ಸ ದ ಎರ್ಸಿಲ್ (1553-1594) ಲಾ ಅ್ಯರಕಾನ ಎಂಬ ಕವನವನ್ನು ಬರೆದ. ಇದು ಆ ಕಾಲಕ್ಕೆ ಮಹತ್ತ್ವಪೂರ್ಣ ಪ್ರಭಾವವನ್ನು ಬೀರಿತು. ಇದರಿಂದಾಗಿ ಚಿಲಿ ದೇಶದಲ್ಲಿ ಅಮೆರಿಕದಲ್ಲೆಲ್ಲೂ ಕಾಣಬಾರದಷ್ಟು ದೊಡ್ಡ ಪರಿಮಾಣದಲ್ಲಿ ಉತ್ತಮ ಸಾಹಿತ್ಯ ಕೃತಿಗಳು ನಿರ್ಮಾಣವಾದುವು. ಎರ್ಸಿಲ್ಲನ ಪ್ರಸಿದ್ಧ ಅನುಯಾಯಿಗಳಲ್ಲಿ ಮುಖ್ಯರಾದವರೆಂದರೆ ಅ್ಯರಕೊ ದಮಾದೊ ಕೃತಿಯ ಕರ್ತೃ ಪೆದ್ರೊ ಲೆ ಓನಾ (1570-1643). ಪ್ಯುರೇನ್ ಇಂದೋಮಿತೊ ಕೃತಿಯ ಕರ್ತೃ ಆಲ್ವಾರೆeóï ದ ಟೊಲೆಡೋ ಮತ್ತು ಆಂತೋನಿಯೊ ದ ಕ್ವಿನೋನೆ, ಮೆಲ್ಟೋರ್ ಜೂಫ್ರೆದ ಅಗಿಲ್ಲ, ದಿಯೇಗೊ ಸಾಂಟಿಸ್ಟೆಬಾನ್ ಓಸಾರಿಯೋ-ಮೊದಲಾದವರು.

	ಹೀಗೆ ಆರಂಭಗೊಂಡ ಸಾಹಿತ್ಯ 19ನೆಯ ಶತಮಾನದ ವರೆಗೂ, ಏಕೋ ಏನೋ, ಸಾಕಷ್ಟು ಅಭಿವೃದ್ಧಿ ಹೊಂದಲಿಲ್ಲ. 19ನೆಯ ಶತಮಾನದಲ್ಲಿ ಸಾಹಿತ್ಯ ಮರುಹುಟ್ಟು ಪಡೆಯಿತು. ವಿದ್ವಾಂಸ ಹಾಗೂ ಕವಿಯಾದ ಆಂದ್ರೆ ಬೆಲ್ಲೊ (1781-1864) ಮತ್ತು ದೇಶಭ್ರಷ್ಟರಾಗಿದ್ದ ಅರ್ಜಂಟೀನದವರಾದ ದೊಮಿಂಗೊ ಫಾಸ್ಟಿನೊ ಸಾರ್ಮಿಂಟೊ, ಜಾನ್ ಬತೀಸ್ತ ಅಲ್ಬೆರ್ಡಿ ಮತ್ತು ವಿಸೆಂಟೆ ಫೈಡಲ್ ಲೊಪೆ¸óï ಮೊದಲಾದವರು ತಮ್ಮ ಬೌದ್ಧಿಕ ಶಕ್ತಿಯನ್ನು ನಾಡಿನ ಸಾಹಿತ್ಯಕ್ಕೆ ತಂದುಕೊಟ್ಟರು. 1842ರಲ್ಲಿ ಸ್ಥಾಪಿತವಾದ ಈ ಚಳವಳಿಯ ಕೇಂದ್ರಸ್ಥಾನ ಸೊಸಿಯದಾದ್ ಲಿಟರೇರಿಯ ಎಂಬ ಸಂಸ್ಥೆಯಾಗಿತ್ತು. ಇದರಲ್ಲಿ ಕಾದಂಬರಿಕಾರರು, ಕವಿಗಳು ಮೊದಲಾದ ಎಲ್ಲ ಬಗೆಯ ಸಾಹಿತಿಗಳೂ ಇದ್ದರು. ಕಾದಂಬರಿಕಾರರ ಜೋಸೆ ವಿಕ್ಟೋರಿನೊ ಲಾಸ್ಟಾರಿಯ (1817-1888), ಕವಿ ಸಾಲ್ವಾದೊರ್ ಸಾನ್ ಫುಯಂಟೆ (1817-1860) ಹಾಗೂ ಸ್ಥಳೀಯ ವಿಷಯಗಳನ್ನು ಕುರಿತು ಬರೆಯುತ್ತಿದ್ದ ಲೇಖಕರಲ್ಲಿ ಅಗ್ರ ಪಂಕ್ತಿಗೆ ಸೇರಿದ್ದ ಜೋಸೆ ಜೋಕ್ವಿನ್ ವಲ್ಲೆಜೊ (1809-1858) (ಈತನನ್ನು ಜೊಟಬೆಚೆಯ ಎಂದೂ ಕರೆಯುತ್ತಾರೆ), ಇವರು ಈ ಸಂಸ್ಥೆಯ ಪ್ರಮುಖ ಸದಸ್ಯರು. ಜೊಟಬೆಚೆಯ ಅನುಯಾಯಿಯೆಂದು ಡೇನಿಯಲ್ ಬರೋ ಗ್ರೇಜ್‍ನನ್ನು (1834-1904) ಪರಿಗಣಿಸಬಹುದು. ಈತ ತುಂಟರ ಸಾಹಸಕೃತ್ಯಗಳನ್ನು ಕುರಿತ ಕಾದಂಬರಿಗಳನ್ನು ಬರೆದಿದ್ದಾನೆ. ಪ್ರಕೃತಿ ತತ್ತ್ವವಾದಿ ಗುಂಪಿಗೆ ಸೇರಿದ್ದು, ಕಾಲಕ್ರಮೇಣ ಅಸಂಖ್ಯಾತ ಚಿಲಿ ಲೇಖಕರನ್ನು ಆಕರ್ಷಿಸಿದ್ದ ಆಲ್ಬರ್ಟೊ ಬ್ಲೆಸ್ಟ್ ಗಾನನೂ (1830-1920) ಮುಖ್ಯನಾದವ. 19ನೆಯ ಶತಮಾನದ ಕೊನೆಯ ವೇಳೆಯಲ್ಲಿ ಚಿಲಿ ಸಮಾಜದ ಸುಂದರ ಚಿತ್ರಣವನ್ನು ಈತ ನೀಡಿದ್ದಾನೆ. ಈತನ ಬರವಣಿಗೆ ಬಹಳ ಶಕ್ತಿಯುತವಾದ್ದು. ಚಿಲಿ ಸಾಹಿತ್ಯದ ಸ್ವರ್ಣಯುಗ, ವಿಶೇಷವಾಗಿ ಕಾವ್ಯಪ್ರಕಾರದಲ್ಲಿ, 20ನೆಯ ಶತಮಾನದಿಂದ ಆರಂಭವಾಯಿತೆಂದು ಹೇಳಬಹುದು. ರುಬೇನ್ ದರೀಯೋನ ಪ್ರಭಾವ ಈ ಶತಮಾನದ ಮೂವರು ಮಹಾಕವಿಗಳ ಮೇಲೆ ಇದೆಯೆನ್ನುವರು : ಸ್ವತಂತ್ರವಾಗಿ ಆಲೋಚಿಸುವ ಅಸಾಧಾರಣ ಪ್ರತಿಭೆಯುಳ್ಳ ವಿಸೆಂಟೆ ಹ್ಯುದೋಬ್ರೊ (1893-1948), ನೊಬೆಲ್ ಪ್ರಶಸ್ತಿವಿಜೇತ ಗಾಬ್ರಿಯೇಲ ಮಿಸ್ಟ್ರಲ್ (1889-1957) ಹಾಗೂ ಪಾಬ್ಲೊ ನೆರುದ (1904). ಇತರ ಸಮಕಾಲೀನ ಕವಿಗಳಲ್ಲಿ ಪ್ರಸಿದ್ಧರಾಗಿರುವವರು ಪಾಬ್ಲೊ ದೋ ರೋಖ (1895-), ಜುವೆನಿಕೊ ವಲ್ಲೆ (1907-) ಮತ್ತು ಆಂತೋನಿಯೊ ದ ಅಂದರ್ರಗ (1911- ).

	ಈ ಶತಮಾನದಲ್ಲಿ ಕಾದಂಬರಿ ಪ್ರಕಾರವೂ ಸಿದ್ಧಿಯನ್ನು ಪಡೆಯಿತು. ಶತಮಾನದ ಆರಂಭಕಾಲದಲ್ಲಿದ್ದ ಆಗಸ್ಟೊ ದ ಹಾಮರ್ (1880-1950), ಟಾಲ್‍ಸ್ಟಾಯ್‍ನ ಮನೋಭಾವವನ್ನೇ ತನ್ನ ಕಾದಂಬರಿಗಳಲ್ಲೂ ವ್ಯಕ್ತಪಡಿಸಿದ್ದಾನೆ. ಈತ ಸುಮಾರು ಹತ್ತು ಕೃತಿಗಳನ್ನು ರಚಿಸಿದ್ದಾನೆ. ಇವುಗಳಲ್ಲಿ ವಿದೇಶಿ ಹಿನ್ನೆಲೆಗಳನ್ನು ಕಾಣಬಹುದು. ಎಡ್ಯುಯಾರ್ಡೊ ಬ್ಯಾರಿಯೋಸ್ (1884-), ಜೆನಾರೊ ಪ್ರಿಯೆಟೊ (1889-1946), ಮರಿಯಾನೊ ಲತೋರೆ (1886-1946) ಮೊದಲಾದವರೂ ಕಾದಂಬರಿಗಳನ್ನು ರಚಿಸಿದ್ದಾರೆ. ಮರಿಯಾನೊ ಲತೋರೆಯ ಕೃತಿಗಳಲ್ಲಿ ಚಿಲಿಯ ಪರ್ವತಗಳು ಮತ್ತು ಹಳ್ಳಿಗಾಡುಗಳ ಚಿತ್ರಣ ಸೊಗಸಾಗಿ ಮೂಡಿಬಂದಿದೆ. ಮ್ಯಾನ್ಯುಯೆಲ್ ರೋಜಸ್ (1896- ) ಬಹುಮಟ್ಟಗೆ ನಗರಜೀವನವನ್ನು ಚಿತ್ರಿಸುತ್ತದೆ. ಈತನ ಹಿಚೊ ದ ಲಾದ್ರೊನ್ (1951) ಕಾದಂಬರಿ ತುಂಟರ ಸಾಹಸಕೃತ್ಯಗಳನ್ನು ಅತ್ಯಂತ ರಮ್ಯವಾಗಿ ಚಿತ್ರಿಸುತ್ತದೆ.
(ಎಚ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ